ಚಿಕಿತ್ಸಾ ಮನಶ್ಯಾಸ್ತ್ರ -
ಮನುಷ್ಯನ ಮಾನಸಿಕ ಸಮಸ್ಯೆಗಳನ್ನೂ ವರ್ತನಾ ಸಮಸ್ಯೆಗಳನ್ನೂ ಮತ್ತು ಸಾಮಾಜಿಕ ಸಮಸ್ಯೆಗಳನ್ನೂ ಅಭ್ಯಸಿಸಿ ಅವುಗಳಿಗೆ ಯುಕ್ತ ಪರಿಹಾರಗಳನ್ನು ಹುಡುಕುವ ಮನಶ್ಯಾಸ್ತ್ರ ವಿಭಾಗ (ಕ್ಲಿನಿಕಲ್ ಸೈಕಾಲಜಿ). ಮಾನವ ಹಾಗೂ ಪ್ರಾಣಿವರ್ಗದ ವರ್ತನೆ ಮತ್ತು ಮನೋ ವ್ಯಾಪಾರಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವುದು ಮನಶ್ಯಾಸ್ತ್ರದ ಇನ್ನೊಂದು ಮುಖ್ಯ ಕೆಲಸ. ಕೇವಲ ಶಾಸ್ತ್ರಜ್ಞಾನದಿಂದ ಚಿಕಿತ್ಸಾ ಪ್ರಾವೀಣ್ಯ ಬರಲಾರದಾದುದರಿಂದ ಚಿಕಿತ್ಸಾ ಮನಶ್ಯಾಸ್ತ್ರದಲ್ಲಿ ಆಸಕ್ತರಿಗೆ ತರಬೇತಿ ಕೊಡಲು ಅನೇಕ ಸಂಸ್ಥೆಗಳಿವೆ. ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಹಾಗೂ ನರವಿಜ್ಞಾನ ಸಂಸ್ಥೆ ಇಂಥವುಗಳಲ್ಲೊಂದು. ಇಲ್ಲಿ ವೈದ್ಯರಿಗೆ ಹಾಗೂ ಇತರ ವೈದ್ಯರಿಗೆ ತರಬೇತಿ ಕೊಡುವುದರ ಜೊತೆಗೆ ರೋಗಿಗಳನ್ನು ಪರೀಕ್ಷಿಸಿ ಪರಿಹಾರ ಸೂಚಿಸುವ ವ್ಯವಸ್ಥೆಯೂ ಹಾಗೂ ಜೈವಿಕ, ಮಾನಸಿಕ, ಸಾಮಾಜಿಕ ಅಂಶಗಳ ಸಂಶೋಧನೆಗಳೂ ನಡೆದಿವೆ.

ಅನೇಕ ಮಕ್ಕಳು ತಮ್ಮ ವರ್ತನೆಯಲ್ಲಿ ಕೆಲವು ಲೋಪಗಳನ್ನು ವ್ಯಕ್ತಪಡಿಸುವರು. ಉದಾಹರಣೆಗೆ ಮೊದಲ ವರ್ಷದಲ್ಲಿಯೇ ಕೆಲವು ಮಕ್ಕಳು ಆಹಾರವನ್ನು ಕ್ರಮಬದ್ಧವಾಗಿ ಸ್ವೀಕರಿಸುವುದಿಲ್ಲ. ಕೆಲವರು ರಾತ್ರಿವೇಳೆ ನಿದ್ದೆ ಮಾಡದೆ ತಂದೆ ತಾಯಿಗಳಿಗೆ ವಿಪರೀತ ಕಷ್ಟವನ್ನು ಕೊಡುವರು. ಕೆಲವರು ಚಂಡಿಗಳಾಗಿ ಯಾವಾಗಲೂ ಅಳುವರು. ಮತ್ತೆ ಕೆಲವರು ತಾಯಿಯನ್ನು ಬಿಟ್ಟು ಒಂದು ಕ್ಷಣವೂ ಇರಲಾರರು. ಇನ್ನೂ ಕೆಲವರು ಬೆಳೆದ ಮೇಲೆ ಶಾಲೆಗೆ ಹೋಗುವುದಕ್ಕೆ ರಗಳೆ ಮಾಡುವರು.

ಬುದ್ಧಿಶಕ್ತಿ ಸರಿಯಾಗಿ ಬೆಳೆಯದೆ ಇರುವ ಕಾರಣದಿಂದ ಈ ಮಕ್ಕಳು ತಿಳಿವಳಿಕೆಯಲ್ಲಿಯೂ ಭಾವನಾ ಜೀವನದಲ್ಲಿಯೂ ಸಾಮಾಜಿಕ ಜೀವನದಲ್ಲಿಯೂ ಕುಂದು ಕೊರತೆಗಳನ್ನು ವ್ಯಕ್ತಪಡಿಸುವರು. ಇಂಥ ಮಕ್ಕಳಲ್ಲಿ ಕಲಿಕೆ ಬಹಳ ನಿಧಾನವಾಗಿ ಮುಂದುವರಿಯುವುದು. ಕೆಲ ಮಕ್ಕಳಲ್ಲಂತೂ ಕಲಿಕೆ ಎಂಬುದು ಇರುವುದೇ ಇಲ್ಲ. ಮತ್ತೆ ಕೆಲವರಲ್ಲಿ ವಯಸ್ಸಿಗೆ ತಕ್ಕ ಬೌದ್ಧಿಕ ಬೆಳವಣಿಗೆಯಾಗಲಿ ಕೈಚಳಕವಾಗಲಿ ಇರುವುದಿಲ್ಲ. ಇಂಥ ನ್ಯೂನತೆ ಎಲ್ಲ ದೇಶಗಳ ಎಳೆಯರಲ್ಲೂ ಉಂಟು. ಬುದ್ಧಿಶಕ್ತಿಯ ನ್ಯೂನತೆ (ಬುದ್ದಿಮಾಂದ್ಯತೆ)  ಪ್ರಪಂಚದಲ್ಲಿ 2% ಜನರಲ್ಲಿ ಇದೆಯೆಂದು ಅಂದಾಜು ಮಾಡಲಾಗಿದೆ.

ಬುದ್ಧಿ ಕುಂಠಿತವಾದ ಮಕ್ಕಳು ಮನೆಯಲ್ಲಿ ತಂದೆತಾಯಿಗಳಿಗೂ ಶಾಲೆಯಲ್ಲಿ ಉಪಾಧ್ಯಾಯರಿಗೂ ಹೊರಗಡೆ ಸಮಾಜಕ್ಕೂ ಅನೇಕ ಸಮಸ್ಯೆಗಳನ್ನುಂಟು ಮಾಡುವರು. ಬುದ್ಧಿಶಕ್ತಿಯಲ್ಲಿಯೇ ನ್ಯೂನತೆ ಇರುವುದರಿಂದ ಇಂಥ ಮಕ್ಕಳು ಎಷ್ಟು ಶ್ರಮಪಟ್ಟರೂ ಪಠ್ಯಪುಸ್ತಕಗಳ ವಿಷಯಗಳನ್ನಾಗಲೀ ಕಸಬನ್ನಾಗಲೀ ಸಾಧಾರಣ ಮಟ್ಟದಲ್ಲಿಯೂ ಕಲಿಯಲಾರರು. ಇನ್ನು ಕೆಲಮಕ್ಕಳು ಶಾಲೆಗೆ ಚಕ್ಕರ್ ಹಾಕುವರು. ಕೆಲಮಕ್ಕಳು ತಮ್ಮ ಪಾಠವನ್ನು ಸರಿಯಾಗಿ ಅಭ್ಯಸಿಸದೆ ಪ್ರತಿ ವರ್ಷವೂ ಹಿಂದುಳಿಯುವರು. ಮತ್ತೆ ಕೆಲವರು ಶಾಲೆಯಲ್ಲಿ ಸಮವಯಸ್ಕರ ಜೊತೆಯಲ್ಲಿಯೂ ಉಪಾಧ್ಯಾಯರ ಜೊತೆಯಲ್ಲಿಯೂ ಜಗಳವಾಡುವುದನ್ನೇ ಅಭ್ಯಾಸ ಮಾಡುವರು. ಇಲ್ಲವೆ ಏನಾದರೊಂದು ಅಪರಾಧ ಮಾಡುತ್ತಲೇ ಇರುವರು. ಕದಿಯುವುದು ಮಾತ್ರವಲ್ಲದೆ ಅನೇಕ ದುರಭ್ಯಾಸಗಳಿಗೆ ಗುರಿಯಾಗುವವರೂ ಇಲ್ಲದಿಲ್ಲ. ಕೆಲವರು ಹೇಳದೆ ಕೇಳದೆ ಊರನ್ನು ಬಿಟ್ಟು ಓಡಿಹೋಗಬಹುದು; ಮತ್ತೆ ಕೆಲವರು ಬೀಡಿ, ಸಿಗರೇಟು. ಗಾಂಜಾ, ಸಾರಾಯಿ ಮುಂತಾದ ಮಾದಕಗಳ ಸೇವನೆಯಲ್ಲಿ ತೊಡಗಬಹುದು. ತಮ್ಮ ಆಶೆ, ಕೋಪಗಳ ಮೇಲೆ ಹತೋಟಿ ಇಲ್ಲದ ಕೆಲವರು ಖೂನಿ ಮಾಡಬಹುದು. ಆತ್ಮಹತ್ಯೆ ಮಾಡಿಕೊಳ್ಳಬಹುದು. ಇಂಥವನ್ನು ನಡವಳಿಕೆ ಸಮಸ್ಯೆಗಳು ಎನ್ನುತ್ತಾರೆ. ಮಕ್ಕಳಲ್ಲಿ ವರ್ತನಾಸಮಸ್ಯೆಗಳು ಇರುವ ಹಾಗೆ, ತರುಣರಲ್ಲಿ ನಡವಳಿಕೆಗಳ ಸಮಸ್ಯೆಗಳು ಇರುವ ಹಾಗೆ, ವಯಸ್ಕರಲ್ಲಿ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇರುತ್ತವೆ.

ಶೇಕಡಾ 25 ರಿಂದ 30 ರಷ್ಟು ವಯಸ್ಕರಲ್ಲಿ ಹಿಂಜರಿಯುವಿಕೆ (ಕೀಳರಿಮೆ), ಸುಲಭದಲ್ಲಿ ಮಣಿಯವುದು, ಹೆದರಿಕೆ, ಉದ್ವೇಗ, ಸಿಟ್ಟು, ದುಃಖ, ಔದಾಸೀನ್ಯ-ಮುಂತಾದ ಮನೋಭಾವಗಳು ಉದ್ಭವಿಸಿ, ವ್ಯಕ್ತಿ ತನ್ನ ಕೆಲಸದಲ್ಲಿಯೂ ವಿರಾಮಕಾರ್ಯಕಲಾಪಗಳಲ್ಲಿಯೂ ಅಪಕ್ವತೆ, ಅನನುಭವಿಯಂತೆ ವರ್ತಿಸುತ್ತ ವ್ಯಾಕುಲಚಿತ್ತನಾಗುತ್ತಾನೆ. ಕೆಲಸ ಕರ್ತವ್ಯಗಳಲ್ಲಿ ಅಸಮರ್ಥನಾಗುತ್ತಾನೆ.

ಇಂಥ ಸಮಸ್ಯೆಗಳ ಸ್ವಭಾವವನ್ನು ನಿರ್ಣಯಿಸುವುದಕ್ಕೆ ಚಿಕಿತ್ಸಾ ಮನೋವಿಜ್ಞಾನಿಗಳು ಮೊತ್ತಮೊದಲು ಆ ವ್ಯಕ್ತಿಯ ವರ್ತನೆಯನ್ನು ಪರಿಶೀಲಿಸುವರು. ತಂದೆ ತಾಯಿಗಳೋ ಉಪಾಧ್ಯಾಯರೋ ಸಮಾಜಸೇವಕರೋ ಆ ವ್ಯಕ್ತಿಯನ್ನು ಯಾವ ಕಾರಣದಿಂದ ಪರೀಕ್ಷಣಕ್ಕೆ ತಮ್ಮಲ್ಲಿಗೆ ಕಳುಹಿಸಿರುವರೆಂಬುದನ್ನು ವಿಶದವಾಗಿ ಗುರುತು ಮಾಡುವರು. ಅಲ್ಲದೆ ವರ್ತನೆಯ ಯತಾರ್ಥ ಹಾಗೂ ಕಾರಣಗಳನ್ನು ತಿಳಿಯಲು ಯತ್ನಿಸುವರು. ಇದನ್ನು ನಿರ್ಣಯಿಸುವಲ್ಲಿ ಪರರ ಹೇಳಿಕೆಗಿಂತ ವ್ಯಕ್ತಿಯ ವರ್ತನೆಯೇ ಮುಖ್ಯವಾಗಬೇಕು. ವ್ಯಕ್ತಿಯ ಹಿಂದಿನ ಜೀವನಚರಿತ್ರೆ ಅಗತ್ಯವಾಗಬಹುದು. ಕಡೆಯದಾಗಿ ಬುದ್ಧಿಶಕ್ತಿಯ ಪರೀಕ್ಷೆಗಳು ವ್ಯಕ್ತಿತ್ವದ ಪರೀಕ್ಷೆಗಳು ಮೊದಲಾದುವನ್ನು ಬಳಿಸಿಕೊಂಡು ಅನೇಕ ವಿಷಯಗಳನ್ನು ಕಲೆಹಾಕಬೇಕಾಗಬಹುದು.

ಇದಾದ ಮೇಲೆ ವ್ಯಕ್ತಿ ಈ ಸಮಸ್ಯೆಗಳಿಂದ ಪಾರಾಗಲು ಯಾವ ಮಾರ್ಗವನ್ನು ಅನುಸರಿಸಬೇಕೆಂಬುದು ನಿರ್ಣಯಿಸಬೇಕು. ಬಾಲ್ಯ ಹಾಗೂ ತಾರುಣ್ಯದಲ್ಲಿ ಉಂಟಾಗುವ ವರ್ತನೆ ಹಾಗೂ ನಡವಳಿಕೆಯ ಸಮಸ್ಯೆಗಳು ಮುಖ್ಯವಾಗಿ ಪೋಷಕರ ಮತ್ತು ಮಗುವಿನ ಇಲ್ಲವೆ ಉಪಾಧ್ಯಾಯ ಮತ್ತು ಮಗುವಿನ ನಡುವಿನ ಸಂಬಂಧಗಳನ್ನು ಅವಲಂಬಿಸಿರುತ್ತವೆ. ಈ ಸಂಬಂಧಗಳನ್ನು ಸರಿಪಡಿಸುವುದೇ ಚಿಕಿತ್ಸಾ ಮನಶ್ಯಾಸ್ತ್ರದ ಮುಖ್ಯಗುರಿ. ಅಂದರೆ ತಾಯಿತಂದೆಗಳು ಉಪಾಧ್ಯಾಯರು ಮತ್ತಿತರರು ಮಗುವಿನ ವಿಚಾರದಲ್ಲಿ ತಮ್ಮ ನಡವಳಿಕೆಯನ್ನು ಬದಲಾಯಿಸಬೇಕಾಗುವುದು. ಇದರ ಪರಿಣಾಮವಾಗಿ ಮಗುವಿನ ವರ್ತನೆಯಲ್ಲಿಯೂ ಕ್ರಮೇಣ ಬದಲಾವಣೆಯುಂಟಾಗುವುದು.

ಬಾಲಕನ ಬುದ್ಧಿಶಕ್ತಿಯ ಬೆಳೆವಣಿಗೆಯಲ್ಲಿ ಲೋಪದೋಷಗಳಿದ್ದಾಗ ವರ್ತನಾ ಸಮಸ್ಯೆಗಳುಂಟಾಗುವುವು, ಇದಕ್ಕೆ ಪರಿಹಾರ ನೀಡಬೇಕಾದಲ್ಲಿ ತಕ್ಕ ಪರೀಕ್ಷಣದಿಂದ ಬಾಲಕನ ಬುದ್ಧಿಶಕ್ತಿಯ ಮಟ್ಟವನ್ನಳೆದು ತಾಯಿತಂದೆಯರಿಗೂ ಪೋಷಕರಿಗೂ ಮತ್ತು ಉಪಾಧ್ಯಾಯರಿಗೂ ಅದನ್ನು ತಿಳಿಯಪಡಿಸಬೇಕು.

ನಡತೆಯ ಸಮಸ್ಯೆಗಳು ಮನೆಯ ಸ್ನೇಹಿತವರ್ಗಗಳ ಆವರಣವನ್ನು ಅವಲಂಬಿಸಿವೆ. ತಂದೆತಾಯಿಗಳಿಂದ ತನಗೆ ಬೇಕಾದ ಪ್ರೇಮ ಲಭಿಸದೆ ಹೋದರೆ ಮಗುವಿನ ನಡತೆ ವಿಕೃತವಾಗುವುದು. ಮನೆಯಲ್ಲಿ ಮೆಚ್ಚಿಗೆ ದೊರೆಯದೆ ಹೋದರೆ ಕಳ್ಳತನ ಮಾಡಿ ಸ್ನೇಹವರ್ಗದಲ್ಲಿ ಮೆಚ್ಚುಗೆಯನ್ನು ಪಡೆಯಲು ಮಗು ಪ್ರಯತ್ನಿಸುತ್ತದೆ.

ಈ ಮೇಲೆ ಹೇಳಿರುವ ಮತ್ತು ಇತರ ಕುಂದುಕೊರತೆಗಳು ವಯಸ್ಕರಲ್ಲಿ ಕಂಡು ಬಂದಾಗ ಅವರಿಗೂ ಮಾನಸಿಕ ಚಿಕಿತ್ಸೆ ಅಗತ್ಯವಾಗಬಹುದು. ವ್ಯಕ್ತಿಯ ಆಲೋಚನೆಗಳನ್ನು ಸರಿಪಡಿಸುವುದು ಸಕಾರಾತ್ಮಕವಾಗಿ ಆಲೋಚಿಸುವಂತೆ ಮಾಡುವುದು, ವ್ಯಕ್ತಿಯ ವರ್ತನೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರುವುದು, ಭಾವನಾತ್ಮಕ ಆಸರೆ ನೀಡುವುದು, ಜೀವನ ಕೌಶಲಗಳನ್ನು ಕಲಿಸುವುದು ಚಿಕಿತ್ಸೆಯ ಮುಖ್ಯಾಂಗಗಳು.

ಮಾನಸಿಕವಾಗಿ ಲೋಪದೋಷಗಳಿರುವ ವ್ಯಕ್ತಿ ಸರಿಯಾಗಲು ಅವನು ಹೇಗೆ ಪ್ರಯತ್ನಿಸಬೇಕು, ಅವನ ಸುತ್ತಲಿನ ಜನ ಹೇಗೆ ವರ್ತಿಸಿ ಅವನನ್ನು ಸರಿಪಡಿಸಬೇಕು ಎಂಬುದನ್ನು ಚಿಕಿತ್ಸಾ ಮನಶ್ಯಾಸ್ತ್ರ ವಿಶದವಾಗಿ ಪರಿಶೀಲಿಸುತ್ತದೆ.
(ಬಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ